ಆದಂ ಈವ್
ಕ್ರೈಸ್ತಮತದ ಪ್ರಕಾರ ಆದಿ ಮಾತಾಪಿತೃಗಳು. ಹೀಬ್ರೂ ಭಾಷೆಯಲ್ಲಿ ಆದಂ ಎಂದರೆ ಮಾನವ ಜನಾಂಗವೆಂದೂ ಈವ್ ಎಂದರೆ ಜೀವ ಎಂದೂ ಅರ್ಥ. ಈಬ್ರಾನಿಯಲ್ಲಿ ಆದಾಮಾ ಪದದ ಅರ್ಥ ಕೆಂಪು ಮಣ್ಣಿನಿಂದ ಮಾಡಿದ್ದು ಎಂದು. ಮಾನವನ ಶರೀರ ಮಣ್ಣಿನಿಂದ ಮಾಡಲ್ಪಟ್ಟಿದ್ದು ಕೊನೆಗೆ ಮಣ್ಣಿನಲ್ಲೇ ಲೀನವಾಗುತ್ತದೆ. ಇದರಿಂದ ಪ್ರಥಮ ಮಾನವನ ಹೆಸರೂ ಆದಂ ಎಂದಾಗಿದೆ. ದೇವರ ತೋಟದಲ್ಲಿ ದೈವಾದೇಶದ ಪ್ರಕಾರ ಉದ್ಭವಿಸಿದ ಈ ಆದಿ ದಂಪತಿಗಳ ಬಗ್ಗೆ ಜೆನಿಸಿಸ್‍ನಲ್ಲಿ ವಿವರವಾಗಿ ಹೇಳಿದೆ. ಸೇಂಟ್ ಪೌಲನ ಪ್ರಕಾರ ಆದಂ ಮಾನವನ ಪ್ರಾಪಂಚಿಕ ಭಾಗವನ್ನೂ ನಿರ್ದೇಶಿಸುವವ. ದೇವರ ತೋಟದಲ್ಲಿ ಬೆಳೆದಿದ್ದ ತಿನ್ನಬಾರದ ಹಣ್ಣೊಂದನ್ನು ಹೆಬ್ಬಾವೊಂದರ ಆದೇಶದಂತೆ ಈವ್ ತಿಂದಳು ಮತ್ತು ಆದಂನನ್ನೂ ತಿನ್ನಗೊಳಿಸಿದಳು. ಇದರಿಂದ ಅವರೀರ್ವರಿಗೂ ತೋಟ ಬಿಟ್ಟು ತೆರಳಬೇಕಾದ ಶಿಕ್ಷೆ ಒದಗಿತು. ಮಾನವಸೃಷ್ಟಿಗೆ ಸಂಬಂಧಿಸಿದ ಬ್ಯಾಬಿಲೋನಿಯನ್ನರ ಪುರಾಣಕಥೆಗಳನ್ನು ವಿಮರ್ಶಕರು ಆದಂನ ಕಥೆಗೆ ಹೋಲಿಸುತ್ತಾರೆ. ಆದಂನ ಸೃಷ್ಟಿ ಎಲ್ಲಿ ಹೇಗೆ ಆಯಿತೆಂದು ಬೈಬಲ್ಲಿನಲ್ಲಿ ಎಲ್ಲೂ ಖಚಿತವಾಗಿ ಹೇಳಿಲ್ಲ. ಅದರ ದೃಷ್ಟಿಕೋನ ಧಾರ್ಮಿಕ; ವೈಜ್ಞಾನಿಕವಲ್ಲ. ಮನುಷ್ಯ ಮತ್ತು ದೇವರಲ್ಲಿ ಪುನಃ ಸ್ನೇಹ ಸಂಪಾದಿಸಿದುದರಿಂದ ಬೈಬಲ್ಲಿನಲ್ಲಿ ಯೇಸುವಿಗೆ ಎರಡನೆಯ ಆದಂ ಎಂದು ಹೇಳಲಾಗುತ್ತದೆ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ